ಕಣಗಿಲೆ ಗಿಡದ ಕುಟುಂಬ : ಸಂಯುಕ್ತ ಹೂದಳಗಳನ್ನುಳ್ಳ ದ್ವಿದಳ ಸಸ್ಯವರ್ಗದ ಒಂದು ಕುಟುಂಬ (ಅಪೊಸೈನೇಸೀ). ಇದರಲ್ಲಿ ಸು. 1,400 ಪ್ರಭೇದಗಳನ್ನೊಳಗೊಂಡ 180 ಜಾತಿಯ ಗಿಡಗಳಿವೆ. ಬಹುಪಾಲು ಸಸ್ಯಗಳು ಉಷ್ಣವಲಯಗಳಲ್ಲಿ ಕಾಣಬರುವಂಥವು. 

ಸಮಶೀತೋಷ್ಣವಲಯದಲ್ಲೂ ಕೆಲವು ಪ್ರಭೇದಗಳಿವೆ. ಈ ಗಿಡಗಳಲ್ಲಿ ಹೆಚ್ಚಿನವು ಶಾಕಗಳು (ಮೂಲಿಕೆ). ಪೊದೆಸಸ್ಯಗಳೂ ಬಳ್ಳಿಗಳೂ ಉಂಟು.
ಈ ಕುಟುಂಬದ ವಿಶಿಷ್ಟ ಲಕ್ಷಣಗಳು ಇವು: ಕಾಂಡವನ್ನು ಅಡ್ಡಕೊಯ್ದು ಪರೀಕ್ಷಿಸಿದಾಗ ಕಾಣಬರುವ ವಿಶೇಷಬಗೆಯ ನಾಲ ಸಮೂಹಗಳು (ಇವುಗಳಲ್ಲಿ ಮಧ್ಯೆ ನೀರ್ನಾಳಗಳ ಗುಂಪು ಮೇಲೆ ಮತ್ತು ಕೆಳಗೆ ಆಹಾರನಾಳಗಳ ಗುಂಪು ಇದ್ದು ಅವನ್ನು ಬೈಕೊಲ್ಯಾಟರಲ್ 

ವ್ಯಾಸ್ಕುಲರ್ ಬಂಡಲ್ಸ್‌ ಎನ್ನುತ್ತಾರೆ); ಕಾಂಡ ಹಾಗೂ ಎಲೆಗಳಲ್ಲಿ ಬಿಳಿಯ ಅಥವಾ ಬಣ್ಣವಿಲ್ಲದ ಹಾಲ್ನೊರೆ (ಲೇಟೆಕ್ಸ್‌) ಇರುವುದು; ಸರಳ ಎಲೆಗಳು ಪರ್ಯಾಯ, ಅಭಿಮುಖ ಅಥವಾ ಸುತ್ತುಮಾದರಿಯಲ್ಲಿ ಜೋಡಣೆಗೊಂಡಿರುವುದು; ಸಂಕೀರ್ಣ ಮಾದರಿಯ ಅಥವಾ 

ಮಧ್ಯಾರಂಭಿ ಮಾದರಿಯ ಹೂಗೊಂಚಲುಗಳು; ಆರೀಯ ಸಮಾಂಗತೆಯುಳ್ಳ ದ್ವಿಲಿಂಗಿ ಹೂಗಳು; ಸಂಯುಕ್ತ ಮಾದರಿಯ ಪುಷ್ಪಪತ್ರ ಹಾಗೂ ಪುಷ್ಪದಳಗಳು; ದಳಗಳ ಬುಡದಲ್ಲಿ ಮಧುಗ್ರಂಥಿಗಳಿರುವುದು; ಹೂದಳಗಳಿಗೆ ಪರ್ಯಾಯವಾಗಿ ಜೋಡಿಸಿರುವ ಐದು ಕೇಸರಗಳು 

ಮತ್ತು ಬಾಣದ ಮೊನೆಯಂತಿರುವ ಪರಾಗಕೋಶಗಳು; ಸಂಪುರ್ಣ ಅಥವಾ ಅರ್ಧಉಚ್ಚಸ್ಥಾನದ ಎರಡು ಕಾರ್ಪೆಲುಗಳಿಂದಾದ ಅಂಡಾಶಯ; ಅಂಡಾಶಯದ ಶಲಾಕೆ ಮತ್ತು ಶಲಾಕಾಗ್ರದ ಭಾಗಗಳು ಮಾತ್ರ ಕೂಡಿದ್ದು ಬುಡದಭಾಗ ಬಿಡಿಯಾಗಿ ಎರಡು ಅಂಡಕೋಶಗಳನ್ನು 

ಹೊಂದಿರುವುದು; ಅವುಗಳಲ್ಲಿ ಎರಡರಿಂದ ಹಲವಾರು ಅಂಡಕಗಳಿರುವುದು; ಡಮರು ಆಕಾರದ ಶಲಾಕಾಗ್ರ; ಫಲಜೋಡಿಯಾಗಿರುವ ಫಾಲಿಕಲ್ಗಳು; ಬೀಜಗಳಲ್ಲಿ ಅವುಗಳ ಪ್ರಸರಣ ಕ್ರಿಯೆಯಲ್ಲಿ ಸಹಕಾರಿಯಾಗುವ ಕೂದಲುಗಳಿರುವುದು.
ಕಣಗಿಲೆ ಕುಟುಂಬದ ಸಸ್ಯಗಳು ಹಿಂದಿನ ಕಾಲದಿಂದಲೂ ಹಲವಾರು ರೀತಿಯಿಂದ ಉಪಯುಕ್ತವೆನಿಸಿದೆ. ಕೆಲವನ್ನು ಅಲಂಕಾರ ಸಸ್ಯಗಳಾಗಿ ತೋಟಗಳಲ್ಲಿ, ಮನೆಗಳಲ್ಲಿ, ದೇವಸ್ಥಾನಗಳ ಬಳಿಯಲ್ಲಿ, ಬೆಳೆಸುತ್ತಾರೆ. ಉದಾಹರಣೆಗೆ ಕಣಗಿಲೆ (ನೀರಿಯಮ್) ದೇವಕಣಗಿಲೆ 

(ಪ್ಲುಮೇರಿಯ), ಹಳದಿ ಹೂ ಗಿಡ (ಅಲಮಂಡ), ನಂದಿಬಟ್ಲು (ಎರ್ವಟಾಮಿಯ) ಮತ್ತು ಕಾಸಿಕಣಗಿಲೆ (ವಿಂಕ). ಲಾಂಡಾಲ್ಫಿಯ, ಫಂಟೂಮಿಯ, ಅರ್ಸಿಯೋಲ ಮತ್ತು ವಿಲ್ಲೋಗ್ಬಂiÀÄ ಎಂಬುವುಗಳ ಹಾಲ್ನೊರೆಯಿಂದ ರಬ್ಬರ್ ತಯಾರಿಸುತ್ತಾರೆ. ಸರ್ಪಗಂಧಿ (ರಾವುಲ್ಫಿಯ), 

ಆಸ್ಪಿಡೋಸ್ಪರ್ಮ, ಸ್ಟ್ರೊಫ್ಯಾಂತೆಸ್, ಸಪ್ತಪರ್ಣ (ಆಲ್ಸ್ಪೊನಿಯ), ಅಲಮಂಡ, ಬೆಪ್ಪಾಲೆ (ರೈಟಿಯ) ಕೊರಸಿಗನ ಗಿಡ (ಹೊಲೇರಿನ) ಮುಂತಾದವು ಆಯುರ್ವೇದ ಔಷಧಿ ತಯಾರಿಕೆಯಲ್ಲಿ ಹೆಸರಾಗಿವೆ. ಕಬಳಿ (ಕ್ಯಾರಿಸ) ಗಿಡದಿಂದ ಮರದ ಗೊಂಬೆಗಳನ್ನು 

ತಯಾರುಮಾಡುತ್ತಾರೆ. ಅಲ್ಲದೆ ಇದರ ಕಾಯಿಯಿಂದ ಉಪ್ಪಿನಕಾಯಿ ಮಾಡುವುದೂ ಉಂಟು. ಉಷ್ಣವಲಯದಲ್ಲಿ ಬೆಳೆಯುವ ಸರ್ಬೆರ, ಮಡಗಾಸ್ಕರಿನ ನಿವಾಸಿಯಾದ ಟಾಂಜೆ಼ನಿಯ ಮತ್ತು ದಕ್ಷಿಣ ಆಫ್ರಿಕದಲ್ಲಿ ಬೆಳೆಯುವ ಅಕೊಕ್ಯಾಂತೆರ ಎನ್ನುವ ಗಿಡಗಳು 

ವಿಷಪುರಿತವಾಗಿವೆ.               (ಎ.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ